Sunday, February 24, 2019

   ಕವಿ-ಕಾವ್ಯಗಳಲ್ಲಿ ಸ್ವತಂತ್ರ ಮನೋಧರ್ಮ.

೧೩ನೇ ಶತಮಾನದ ಕಾಲಘಟ್ಟದಲ್ಲಿನ ಕಾವ್ಯಗಳಲ್ಲಿ ಮುಖ್ಯವಾಗಿ ಕವಿಗಳಲ್ಲಿ ಕಂಡುಬರುವ ಪ್ರವೃತ್ತಿಗಳಲ್ಲಿ ಸ್ವತಂತ್ರ ಮನೋಧರ್ಮವೂ ಒಂದು. ಈ ಕಾಲಘಟ್ಟದ ಬಹು ಮುಖ್ಯ ಕವಿಗಳಾದ ಜನ್ನ, ಹರಿಹರ, ರಾಘವಾಂಕರಲ್ಲಿ ಬಹು ಸ್ಷಷ್ಟವಾಗಿ ಸ್ವತಂತ್ರ ಮನೋಧರ್ಮ ಕಾವ್ಯ ಸನ್ನಿವೇಶಗಳಲ್ಲಿ ಕಾವ್ಯಧರ್ಮವನ್ನು ಅರಿತು ಬಳಕೆಯಾಗಿದೆ. ೧೩ನೇ ಶತಮಾನ ರಾಜಾಶ್ರಯದಿಂದ ದೈವಾಶ್ರಯಕ್ಕೆ ಹೊರಳಿದ ಕಾಲಘಟ್ಟ. ಇಲ್ಲಿ ಧರ್ಮಪ್ರಸಾರ ಮುಖ್ಯವಾದರೂ ಅದರೊಟ್ಟಿಗೆ ಕಾವ್ಯವಸ್ತುವೂ ಮುಖ್ಯಾಗಿದೆ.
      ಜನ್ನನ ಕಾಲಘಟ್ಟದ ಧರ್ಮಗಳೆರಡರ ತೀವ್ರ ಸಂಘರ್ಷದ ಹಿನ್ನೆಲೆಯಲ್ಲಿ ರಚಿತವಾಗಿರುವ 'ಯಶೋಧರ ಚರಿತೆ' ಮತ್ತು 'ಅನಂತನಾಥ ಪುರಾಣ' ಗಳು  ಸ್ವತಂತ್ರ ಮನೋಧರ್ಮದ ಪ್ರತೀಕವಾಗಿ ನಿಲ್ಲುತ್ತವೆ. ಸಂಸ್ಕೃತದ ವಾದಿರಾಜನ ಯಶೋಧರ ಚರಿತೆಯನ್ನೇ ಆಧರಿಸಿ ತನ್ನ ಯಶೋಧರ ಚರಿತೆಯನ್ನು ರಚಿಸಿದ್ದರೂ ಔಚಿತ್ಯಪೂರ್ಣವಾದ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಜನ್ನನು ಯಶೋಧರ ಚರಿತೆಯಲ್ಲಿ ವರ್ಣಿಸುವ ಚಂಡಮಾರಿ ಮತ್ತು ಅದರ ದೇವಾಲಯ ದ ಸುತ್ತಮುತ್ತಲ ಭೀಕರ ಸನ್ನಿವೇಶವು ವಾದಿರಾಜನಲ್ಲಿ ಜನ್ನನಷ್ಟು ರೌದ್ರ ಭೀಕರವಾಗಿ ವರ್ಣಿತವಾಗಿಲ್ಲ. ಅಲ್ಲಿ ಯತೋಚಿತವಾಗಿ ಬಂದಿರುವ ವರ್ಣನೆ ಜನ್ನನಲ್ಲಿ ನೈಜವಾಗಿ ಒಡಮೂಡಿದೆ. ಇದಕ್ಕೆ ಶೈವಮತೀಯರ ಹಿಂಸಾತ್ಮಕ ರೀತಿಯ ಮತಾಂತರದ ಅಂಶವು ಈ ಸನ್ನಿವೇಷದ ವರ್ಣನೆಗೆ ಜನ್ನನಿಗೆ ನೈಜ ಪ್ರೇರಣೆಯನ್ನೊದಗಿಸಿದೆ. ಸಂಸ್ಕೃತ ಮೂಲದ ಕಥೆಯೊಂದನ್ನ ಕನ್ನಡ ನಾಡಿನ ಮಣ್ಣಿನ ಸೊಗಡಿಗೂ, ತನ್ನ ಧರ್ಮದ ಆಶಯಕ್ಕೂ ಯಶಸ್ವಿಯಾಗಿ ಒಗ್ಗಿಸಿಕೊಳ್ಳುವಲ್ಲಿ ಆತನ ಸ್ವತಂತ್ರ ಮನೋಧರ್ಮ ವ್ಯಕ್ತವಾಗುತ್ತದೆ. ಯಶೋಧರ ಚರಿತೆಯಲ್ಲಿ  ಕೆಲವು ಉದಾಹರಣೆಗಳನ್ನು ಇದಕ್ಕೆ ಪೂರಕವಾಗಿ ನೋಡಬಹುದು.
    ತಾನೊಲಿದ ಮಾವುತನು ಅತ್ಯಂತ ಕುರೂಪಿಯೆಂದು ತಿಳಿದೂ ಅಮೃತಮತಿ "ಮರುಳೇ ಪೊಲ್ಲಮೆಯೆ ಲೇಸು ನಲ್ಲರಮೆಯ್ಯೊಳ್" ಎನ್ನುವ ಮಾತು ಮೂಲದಲ್ಲಿಲ್ಲ. ಈ ಮಾತಿನ ಮೂಲಕ ಜನ್ನ ಅಮೃತ ಮತಿಯ ಗಾಢ ಮೋಹವೆಷ್ಟಿತ್ತೆಂಬುದನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾನೆ. ಜನ್ನನ ಸ್ವತಂತ್ರ ಮನೋಧರ್ಮದ ಹಿನ್ನೆಲೆಯಲ್ಲಿ ಆತನ ಎರಡೂ ಕಾವ್ಯಗಳಲ್ಲಿ ಗಮನಿಸಬಹುದಾದ ಅಂಶವೆಂದರೆ ಆತ ಜೀವನದ ಎಲ್ಲ ದುರಂತತೆಗೂ ಅಥವಾ ಜೀವಿಯ ಅಸಹಜ, ಅಸಂಸ್ಕೃತ ನಡವಳಿಕೆಗಳಿಗೂ ವಿಧಿಯೇ ಕಾರಣ ಎನ್ನುತ್ತಾನೆ. ಉದಾಹರಣೆಗೆ "ಮನಸಿಜನ ಮಾಯೆ ವಿಧಿವಿಲಸನದ ನೆರಂಬಡೆಯೆ ಕೊಂದು ಕೂಗದೆ ನರರಂ", " ನಿಯತಿಯನಾರ್ ಮೀರಿದಪರ್", " ಬಿದಿಯೆಂಬ ಮದಗಜಂ ನೃಪಸದನಸರೋವರದೊಳೆರೆದು ಸೆಳೆ ತಂದುವನಾಂತದೊಳಿಕ್ಕಿದ ಬಾಳಮೃಣಾಳಿದವೊಳ್" ಎನ್ನುವ ಈ ಮಾತುಗಳು ಜನ್ನನ ಸ್ವತಂತ್ರ ಮನೋಧರ್ಮಕ್ಕಿಡಿದ ಕೈಗನ್ನಡಿಯಾಗಿವೆ.
    ಈ ಹಿನ್ನೆಲೆಯಲ್ಲಿ ಕೆ.ವಿ. ರಾಘವಾಚಾರ್ ರವರ " ಒಟ್ಟಿನಲ್ಲಿ ಜನ್ನನ ಕನ್ನಡ ಕೃತಿ ಸಂಸ್ಕೃತ ಕೃತಿಯ ಸರಳಾನುವಾದ ಎನ್ನಬಹುದು, ಜನ್ನನ ಕೃತಿ ವಾದಿರಾಜನ ಕೃತಿಯ ಅನುವಾದವೆಂದ ಮಾತ್ರಕ್ಕೆ ಕನ್ನಡದ್ದು ಸಂಸ್ಕೃತದ ಪಡಿಯಚ್ಚೆಂದಲ್ಲ, ಕನ್ನಡ ಕವಿಯ ಕೈವಾಡವಿಲ್ಲವೆಂದಲ್ಲ. ಜನ್ನಕವಿ ಎಡೆಯರಿತು ಕೆಲವನ್ನು ಹಿಗ್ಗಿಸಿದ್ದಾನೆ, ಕೆಲವನ್ನು ಅಡಕಿಸಿದ್ದಾನೆ. ಮೂಲದಲ್ಲಿ ಅನಗತ್ಯವೆಂದು ತೋರಿದ ಒಂದೆರಡು ಅಂಶಗಳನ್ನು ಬಿಟ್ಟಿದ್ದಾನೆ. ಭಾವ ಪುಷ್ಟಿಗಾಗಿಯೂ ಅರ್ಥಪ್ರಸಾದಕ್ಕಾಗಿಯೂ ಮೂಲದಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸಿದ್ದಾನೆ" ಎಂಬ ಮಾತು ಇದನ್ನು ಪುಷ್ಟೀಕರಿಸುತ್ತದೆ.
       ಮತ್ತೊಬ್ಬ ಕವಿ ರಾಘವಾಂಕನಲ್ಲಿ ಬಹುಮಟ್ಟಿಗೆ ಸ್ವತಂತ್ರ ಮನೋಧರ್ಮ ವ್ಯಕ್ತವಾಗಿರುವುದು ಅವನ ಮೊದಲ ಕೃತಿ ಹರಿಶ್ಚಂದ್ರಕಾವ್ಯದಲ್ಲಿ . ಹಾಗೆಂದು ಉಳಿದ ಕೃತಿಗಳಲ್ಲಿಲ್ಲವೆಂದಲ್ಲ. ಇದೆ ಆದರೆ ಅದರ ಪ್ರಮಾಣ ಕಡಿಮೆ. ಹರಿಶ್ಚಂದ್ರಕಾವ್ಯ ಹೊರತುಪಡಿಸಿ ಉಳಿದ ಕೃತಿಗಳಲ್ಲಿ ಆತ ಒಂದು ಚೌಕಟ್ಟಿನಲ್ಲಿ ಧಾರ್ಮಿಕ ಸೀಮಾರೇಖೆಯ ಒಳಗೆ ಕಾವ್ಯ ರಚಿಸಬೇಕಾದ ಅನಿವಾರ್ಯತೆ ಉಂಟಾಗಿ ಆತನ ಕಥೆ, ಶೈಲಿ, ಆಲೋಚನೆಗಳಿಗೆ ನಿಯಂತ್ರಣ ಹೇರಿವೆ. ಹಾಗಾಗಿಯೇ ಆತ ತನ್ನ ಕೃತಿಯಲ್ಲೊಂದು ಕಡೆಗೆ 'ದಡಿಗ ಜಿನನಂ' ಎಂದು ಪರದೈವ ಮತ್ತು ಪರಮತವನ್ನು ವಿಡಂಬಿಸುತ್ತಾನೆ. ಅದೇನೇ ಇದ್ದರೂ ಹರಿಹರನ ದಾಕ್ಷಾಯಿಣಿ ಶಿವನು ಬೇಡವೆಂದರೂ ತಂದೆಯ ಯಾಗಕ್ಕೆ ಹೋಗುತ್ತಾಳೆ. ಆದರೆ ರಾಘವಾಂಕನ ದಾಕ್ಷಾಯಿಣಿ ಶಿವನ ಒಪ್ಪಿಗೆ ಪಡೆದು ಧಕ್ಷನನ್ನು ಶಿಕ್ಷಿಸುವ ಆವೇಶದಿಂದ ಹೊರಡುತ್ತಾಳೆ. ಇಲ್ಲಿ ರಾಘವಾಂಕನ ಸ್ವತಂತ್ರ ಮನೋಧರ್ಮ ಬೆಳಗಿದೆ.
      ಇನ್ನು ಈತನ ಹರಿಶ್ಚಂದ್ರ ಕಾವ್ಯ ಇಂದ್ರ ಸಭೆಯಿಂದ ಆರಂಭವಾಗುತ್ತದೆ. ಉಳಿದವು ಕೈಲಾಸದಿಂದ ಆರಂಭವಾಗುತ್ತವೆ. ಋಷಿಗಳೀರ್ವರ ಪ್ರತಿಷ್ಟೆ, ಕಲಹಗಳು ರಾಜನಾದ ಹರಿಶ್ಚಂದ್ರನ ಸಂಕಟಕ್ಕೆ ಕಾರಣವಾಗುತ್ತವೆ. ಕಾವ್ಯದ ಶೈಲಿ, ಕತೆ, ಪ್ರಕಾರ, ಹರಿವು-ಹೊಳವು ಎಲ್ಲದರಲ್ಲಿಯೂ ಸ್ವಂತಿಕೆಯಿದೆ. "ಬಾ ರಥವನೇರಿಕೊಳ್, ಆನೊಲ್ಲೆ, ಏಕೊಲ್ಲೆ, ಪರರೊಡವೆ ನನಗಾಗದು, ಆನೀವೆನ್, ಇತ್ತುದನೇನ್ ಈವುದು" ಎನ್ನುವಲ್ಲಿ ಕವಿಯ ನಾಟಕೀಯತೆ ತಿಳಿಯುತ್ತದೆ. ಷಟ್ಪದಿ ಪ್ರಕಾರ ಇಡೀ ಕಾವ್ಯಕ್ಕೆ ಈತನಿಂದಲೇ ಮೊದಲಾದರೂ ಅದನ್ನು ಸಮರ್ಥವಾಗಿ ವಾಗ್ಜರಿಯಾಗಿಸಿದ್ದಾನೆ. ಉದ್ದಂಡ ಷಟ್ಪದಿಯಂತ ಒಂದು ಹೊಸ ಷಟ್ಪದಿ ಪ್ರಕಾರದ ಸೈಷ್ಠಿಕರ್ತನೀತ. ಹೀಗೆ ಅನೇಕ ಆಯಾಮಗಳಲ್ಲಿ ಕವಿಯ ಸ್ವತಂತ್ರ ಮನೋಧರ್ಮ ಪ್ರಜ್ವಲಿಸಿದೆ . 

    ಹರಿಹರ ಮತ್ತೊಬ್ಬ ಪ್ರಮುಖ  ಮತ್ತು ಅಪರೂಪದ ಕವಿ. ಆತನ ಕಥಾವಸ್ತುಗಳಲ್ಲೇ ಸ್ವತಂತ್ರತೆಯಿದೆ. ಆ ಯುಗಧರ್ಮದಲ್ಲಿ ಪ್ರಸಿದ್ದವಾಗಿದ್ದ ಪುರಾಣ ಕಥಾವಸ್ತುಗಳು ಮತ್ತು ಉಪಾಖ್ಯಾನಗಳ ಕಥಾವಸ್ತುವನ್ನು ಕಾವ್ಯಕ್ಕೆ ವಸ್ತುವಾಗಿಸಿದ. ಅಲ್ಲದೆ 'ರಗಳೆ' ಎಂಬ ಹೊಸ ಪ್ರಕಾರದಲ್ಲಿ ಕಾವ್ಯರಚಿಸಿ ಭಾವ, ಭಕ್ತಿಯ ನಿರರ್ಗಳತೆಯನ್ನು ಉಳಿಸಿಕೊಂಡನಲ್ಲದೆ " ಈಶ್ವರಂಗೆಯ್ದೆ ನಾಲಗೆಯಂ ಮಾರಿದೆಂ". "...ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆ.....ಅನವರತಂ ಪೊಗಳ್ದು ಕಡಬೇಡಲೆ ಮಾನವ ನೀನಹರ್ನಿಶಂ ನೆನೆ ಪೊಗಳರ್ಚಿಸೆಮ್ಮ ಕಡು ಸೊಂಪಿನ ಪೆಂಪಿನ ಹಂಪೆಯಾಳ್ದನಂ". ಎನ್ನುವಲ್ಲಿ ಆತನ ಮನೋಧರ್ಮ ಅಭಿವ್ಯಕ್ತಗೊಂಡಿದೆ. ಶರಣರ ಜೀವನವೂ ಕಾವ್ಯವೊಂದರ ವಸ್ತುವಾಗುತ್ತದೆಂಬುದನ್ನು ಮೊದಲಿಗೆ ಯಶಸ್ವಿಯಾಗಿ ಸಹೃದಯರಿಗೆ ಮುಟ್ಟಿಸಿದವನು ಹರಿಹರ. ಅಂದರೆ ಎಲ್ಲಿಯೋ, ಯಾವಾಗಲೋ, ಯಾರೋಹೇಳಿದ ಕಾಲ್ಪನಿಕವೆನ್ನಲು ಸಾಧ್ಯವಿರುವ, ಹೇಳಿದ್ದಷ್ಟೂ ಸತ್ಯವಲ್ಲದ ಪುರಾಣದ ಕಥೆಗಳಿಗಿಂತ ತಾನು ಕಂಡರಿತ ಅಥವಾ ತನಗಿಂತ ಕೆಲ ವರ್ಷಗಳ ಹಿಂದೆ ಬಾಳಿ ಬದುಕಿದ ಕೆಲ ಸಮಕಾಲೀನ ಶಿವಶರಣರು ಅಂದರೆ ೬೩ ಪುರಾತನರು ಹಾಗೂ ೬೩ ನೂತನರ ಜೀವನವನ್ನೇ ರಗಳೆಯ ವಸ್ತುವನ್ನಾಗಿಸಿದ್ದನ್ನು ಕಂಡರೆ ಅವನ ಸ್ವತಂತ್ರ ಮನೋಧರ್ಮ ತಿಳಿದುಬರುತ್ತದೆ.
      ಇನ್ನು ಗಿರಿಜಾ ಕಲ್ಯಾಣದಲ್ಲಿ ಕವಿಯ ಸ್ವಂತಿಕೆ ಗುರ್ತಿಸಲು ಸಾಧ್ಯವಿದೆ. ಇದಕ್ಕೆ ವಸ್ತುವನ್ನು ಪುರಾಣ ಮತ್ತು ಕಾಳಿದಾಸನ ಕುಮಾರ ಸಂಭವದಿಂದ ಕೆಲ ಮಟ್ಟಿಗೆ ಪಡೆದಿದ್ದು ಇಡೀ ಕಥೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಇಲ್ಲಿನ ಕಥಾರಂಭದ ಶೈಲಿಯೇ ಬೇರೆ. ಅದುವರೆಗೂ ಯಾವ ಕಾವ್ಯದಲ್ಲೂ ಕಾಣದ ಸ್ತ್ರೀ ಪ್ರಧಾನ ಮತ್ತು ಸ್ತ್ರೀ ಪರ ದೃಷ್ಠಿಕೋನ, ಸ್ತ್ರೀ ಛಲದ ಮೂಲಕ ದೈವೀಪುರುಷನನ್ನು ಒಲೊಸಿಕೊಂಡ ಬಗೆ ಹೊಸರೀತಿಯ ಆಲೋಚನೆಯೇ ಆಗಿದೆ. ಇಲ್ಲಿನ ಕಥಾ ನಾಯಕಿ ಗಿರಿಜೆ, ಅವಳಿಂದಲೇ ಕಥೆಯ ಆರಂಭ. ಇದು ಹೊಸ ಪ್ರಯೋಗ. ಮೂಲ ಕಾವ್ಯಕ್ಕೂ ಹರಿಹರನ ಕಾವ್ಯಕ್ಕೂ ಅನೇಕ ಹೊಸತನವಿದೆ. ಬೃಹಸ್ಪತಿಯ ದೌತ್ಯ, ವಿಷ್ಣುವಿನಿಂದ ಕಾಮನ ಮನವೊಲಿಸುವಿಕೆ ಇವು ಅದಕ್ಕೆ ಉದಾಹರಣೆಗಳು.
    ಇವಲ್ಲದೆ ವಟುವೇಷದ ಶಿವನನ್ನು ಗಿರಿಜೆ ವಿಭೂತಿಯಿಂದ ಹೊಡೆಯುವುದು ಹರಿಹರನಿಂದ ಸ್ವಯಂ ಕಲ್ಪಿತವಾದ ಸನ್ನಿವೇಷವಾಗಿದೆ. ಅಲ್ಲದೆ ಧರ್ಮ ಮತ್ತು ಕಾವ್ಯಧರ್ಮ,  ಅದರೊಟ್ಟಿಗೆ ಸ್ವತಂತ್ರ ಮನೋಧರ್ಮವು ಬೆರೆತಿರುವುದಕ್ಕೆ ಒಳ್ಳೆಯ ದೃಷ್ಟಾಂತವೆಂದರೆ ಶಿವ- ಪಾರ್ವತಿಯರ ವಿವಾಹ. ಇಲ್ಲಿ ವರ್ಣಿಸುವ ವಿವಾಹ ಸಮಾರಂಭ ಶೈವ ಸಂಪ್ರದಾಯದ ಮದುವೆಯ ವರ್ಣನಯೇ ಆಗಿದೆ. ಹಾಗಯೇ ರಗಳೆಯ ಪ್ರಕಾರವನ್ನು ಬಳಸಿ ಹರಿಹರ ಮಾರ್ಗವನ್ನೇ ನಿರ್ಮಿಸಿದನು.
       ಒಟ್ಟಾರೆ ಇವರಷ್ಟೇ ಅಲ್ಲದೆ ಈ ಕಾಲಘಟ್ಟದ ಬೇರೆ ಕವಿಗಳಾದ ಆಂಡಯ್ಯ, ದೇವಕವಿ, ರುದ್ರಭಟ್ಟ, ಕವಿಕಾಮ, ಚೌಂಡರಸ ಮುಂತಾದವರ ಕಾವ್ಯಗಳಲ್ಲೂ ಸ್ವತಂತ್ರ ಮನೋಧರ್ಮ ವ್ಯಕ್ತಗೊಂಡಿದೆ. ಕನ್ನಡದ ಈ ಕಾಲಘಟ್ಟದ ಕೃತಿಗಳು ಯಾವುದೇ ಕಾವ್ಯಕೃತಿಗಳ ಯಥಾರ್ಥ ಅನುವಾದವಲ್ಲ. ಅವುಗಳು ಕವಿ ಪ್ರತಿಭೆಯ ಸ್ವಂತಿಕೆ ಮತ್ತು ಸ್ವಯಂ ಅನುಭವದಲ್ಲಿ ಅರಳಿದ ಕಾವ್ಯಕಮಲಗಳೆಂದರೆ ಅತಿಶಯೋಕ್ತಿಯಲ್ಲ. ಇಂತಹ ಹಲವು ನಿದರ್ಶನಗಳು ಕನ್ನಡ ಸಾಹಿತ್ಯದಲ್ಲಿದ್ದು ಕವಿಗಳ ಸ್ವತಂತ್ರ ಮನೋಧರ್ಮಕ್ಕಿಡಿದ ನಿದರ್ಶನಗಳಾಗಿವೆ.

Saturday, February 23, 2019

ಜನಪದ ಸಾಹಿತ್ಯ.

೧. ಸಾವಿರ ಕೊಟ್ಟರು ಸವತಿಯ ಮನೆ ಬೇಡ
     ಸಾವಿರದ ಮ್ಯಾಲೆ ಐನೂರು ಕೊಟ್ಟರೂ
     ಮಲ ಮಕ್ಕಳಿರುವ ಮನಿಬ್ಯಾಡ

೨.  ಎಳೆಗರು ಎತ್ತಲ್ಲ ದಳವಾಯಿ ದೊರೆಯಲ್ಲ
      ಮನೆಗೆ ಬಂದಳಿಯ ಮಗನಲ್ಲ ತೌರಿಗೆ
      ಮಾತ ತಂದವಳು ಮಗಳಲ್ಲ

೩.  ಕೊಟ್ಟು ಕುದಿಯಬೇಡ ಮಾಡಿ ಹಂಗಿಸಬೇಡ
      ಇಷ್ಟುಂಡರೆಂದು ಅನ್ನಬೇಡ ಮೂರು ಮಾತು
      ಮುಟ್ಟುವುದು ಶಿವನ ಬಳಿಯಲ್ಲಿ

೪.  ಅಣ್ಣನ ಹೆಂಡತಿ ಕಣ್ಣೀಗೆ ಒಳ್ಳೆಯವಳು
      ಸುಣ್ಣನ ನೀರ ಒಲೆಮುಂದೆ ಇಟಗೊಂಡು
      ಎಮ್ಮಿ ಹಾಲೆಂದು ಬಡಿಸ್ಯಾಳ

೫.  ಅಂಗೀಯ ಮ್ಯಾಲಂಗಿ ಛಂದೇನೊ ನನರಾಯ
      ರಂಬೀ ಮ್ಯಾಲ ರಂಬಿ ಪ್ರತಿರಂಬಿ ಬಂದರ
      ಛಂದೇನೋ ರಾಯ ಮನಿಯಾಗ

೬.  ಕಂದನ ಕೊಡು ಶಿವನೆ ಬಂಧನ ಪಡಲಾರೆ
     ಹಂಗೀನ ಬಾನ ಉಣಲಾರೆ|ಮರ್ತ್ಯದಾಗೆ
     ಬಂಜೆಂಬ ಶಬುದ ಹೊರಲಾರೆ

೭.  ಮಾರಾಯರಯ ಬೈದರ ಬಾರವು ಕಣ್ಣೀರು
      ಮಾರಾಯರ ತಮ್ಮ ಮೈದೂನ ಬೈದರ
      ಮಾಡಿಲ್ಲದ ಮಳೆಯು ಸುರಿದಂಗ
೮.  ಹಲಗೆಯ ಹಿಡಿದಿಲ್ಲ ಬಳಪದಿ ಬರೆದಿಲ್ಲ
      ಶ್ರೀಗುರು ನಮಗೆ ಬರೆಸಿಲ್ಲ ತಾಯಿಗಳಿರ
      ಲೆಖ್ಖಣಿಕೆ ನಮಗೆ ಗೊತ್ತಿಲ್ಲ.

೯.  ತವರೂರ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
      ಸಾಸಿವೆಯಷ್ಟು ಮರಳಿಲ್ಲ ಬಾನಲ್ಲಿ
      ಬಿಸಿಲಿನ ಬೇಗೆ ಸುಡಲಿಲ್ಲ

೧೦. ನೀರ ಮೇಲೆ ನೀರು ನೀರಾಚೆ ತಾವರೆ
        ತಾವರೆಯಾಚೆ ತವರೂರು - ಹೋದಾರೆ
        ತಿರುಗಿ ಬರುವುದಕೆ ಮನಸಿಲ್ಲ.

೧೧.  ಒಬ್ಬರಿರುವ ಮನೆಗೆ ಹಬ್ಬದಿರು ಮಲ್ಲಿಗೆ
         ಒಬ್ಬಳೇ ಕೂದು ಮುಡಿಲಾರೆ ಮಲ್ಲಿಗೆ
         ಹಬ್ಬೋಗು ತನ್ನ ತವರೀಗೆ
೨೦೧೬ qb ದ್ವಿತೀಯ ಪಿ.ಯು.ಕ್ರಿಯಾಪದಗಳ
ಮೂಲ ರೂಪ

೧. ಹೋಗುವನು - ಹೋಗನು
೨. ಬರುವರು - ಬಾರರು
೩. ನೋಡಿದಳು - ನೋಡಳು
೪. ನೋಡುವರು - ನೋಡರು
೫. ತರುವರು - ತಾರರು
೬. ಹಾಡುವರು - ಹಾಡರು
೭. ಆಡಿದರು - ಆಡರು
೮. ಆಡಿತು - ಆಡದು
೯. ಹೋಗುವಿರಿ - ಹೋಗರಿ
೧೦. ಕೇಳುವರು - ಕೇಳರು
೧೧. ತಿನ್ನುವಳು - ತಿನ್ನಳು
೧೨. ಬರುವುದು - ಬಾರದು
೧೩. ಹಾಡುವೆ - ಹಾಡೆನು
೧೪. ನೋಡುವುದು - ನೋಡದು
೧೫. ಕರೆಯಿತು - ಕರೆಯದು
೧೬. ಮರೆಯುವೆ - ಮರೆಯೆನು
೧೭. ತಿನ್ನು - ತಿನ್ನೆ
೧೮. ಹೋಗುವುದು - ಹೋಗದು
೧೯. ನೋಡುವಳು - ನೋಡಳು
೨೦. ತಿಂದಿತು - ತಿನ್ನದು
೨೧. ಬರುತ್ತಾರೆ - ಬಾರರು
೨೨. ಮಾಡುವೆ - ಮಾಡೆನು
೨೩. ಹೋಗುವಳು - ಹೋಗಳು
೨೪. ನಿಲ್ಲುವುದು - ನಿಲ್ಲದು
೨೫. ಕರೆಯುವರು - ಕರೆಯರು
೨೬. ಬರೆವನು - ಬರೆಯನು
ತತ್ಸಮ - ತದ್ಭವ ೨೦೧೯ qb ದ್ವಿತೀಯ ಪಿ.ಯು.

೧. ಭಂಗ - ಬನ್ನ
೨. ಯಶ - ಜಸ
೩. ವೀರ - ಬೀರ
೪. ಮುಖ - ಮೊಗ
೫. ಧರಾ - ದರೆ
೬. ಆಕಾಶ - ಆಗಸ
೭. ಘೂಕ - ಗೂಬೆ
೮. ಪರೀಕ್ಷಿಸು - ಪರಿಕಿಸು
೯. ಅಗ್ನಿ - ಅಗ್ಗಿ
೧೦. ಗ್ರಹ - ಗರ
೧೧. ಬೀಜ - ವೀಜ
೧೨. ದೃಷ್ಠಿ - ದಿಟ್ಟಿ
೧೩. ಕ್ಷಣ - ಚಣ
೧೪. ಪಗೆ - ಹಗೆ
೧೫. ಶಿರ - ಸಿರ
೧೬. ರಾಜ - ರಾಯ
೧೭. ವೇಷ - ವೇಸ
೧೮. ಅಕ್ಷರ - ಅಕ್ಕರ
೧೯. ಅಟವಿ - ಅಡವಿ
೨೦. ಅಜ್ಜ - ಆರ್ಯ
೨೧. ಆಶ್ಚರ್ಯ - ಅಚ್ಚರಿ
೨೨. ಆಜ್ಞೆ - ಆಣೆ
೨೩. ಆಯುಷ್ಯ - ಆಯಸ್ಸು
೨೪. ಉತ್ಸಾಹ - ಉಚ್ಚಾವ
೨೫. ಉದ್ಯೋಗ - ಉಜ್ಜುಗ
೨೬. ಋಜು - ರುಜು
೨೭. ಐಶ್ವರ್ಯ - ಐಸಿರಿ
೨೮. ಕಪಿಲೆ - ಕಪಿಲಾ
೨೯. ಕರ್ಮ - ಕರುಮ
೩೦. ಕಾವ್ಯ - ಕಬ್ಬ
೩೧. ಕಸ್ತೂರಿ - ಕತ್ತುರಿ
೩೨. ಕ್ಷೀರ - ಕೀರ
೩೩. ಗುರು - ಗೊರವ
೩೪. ಗೆಳತಿ - ಕೆಳತಿ
೩೫. ಗೃಹ - ಗೇಹ
೩೬. ಚಂದ್ರ - ಚಂದಿರ
೩೭. ಚತುರ - ಚದುರ
೩೮. ಜೂಜು - ದ್ಯೂತ
೩೯. ತ್ಯಾಗ - ಚಾಗ
೪೦. ದರ್ಶನ - ದರುಶನ
೪೧. ದೀಪ - ದೀವಿಗೆ
೪೨. ದೇವಕುಲ - ದೇಗುಲ
೪೩. ಧ್ವನಿ - ದನಿ
೪೪. ಪಂಕ್ತಿ - ಪಂಕುತಿ
೪೫. ಪಕ್ಷಿ - ಹಕ್ಕಿ/ಪಕ್ಕಿ
೪೬. ಪದ್ಮ - ಪದುಮ
೪೭. ಪಶು - ಹಸು
೪೮. ಭೃಂಗಾರ - ಬಂಗಾರ
೪೯. ಭೂಮಿ - ಬುವಿ
೫೦. ಮರ್ಕಟ - ಮಂಕಟ/ ಮಂಗಡ
೫೧. ಮೃಗ - ಮಿಗ
೫೨. ವಿಸ್ತಾರ - ಬಿತ್ತಾರ
೫೩. ಶಬ್ಧ - ಶಬುದ
೫೪. ಶಯ್ಯಾ - ಸಜ್ಜೆ
೫೫. ಶೂನ್ಯ - ಸೊನ್ನೆ
೫೬. ಸಹಸ್ರ - ಸಾವಿರ
೫೭. ಸ್ನೇಹ - ನೇಹ
೫೮. ವಸತಿ - ಬಸದಿ
೫೯. ಶಾಲಾ - ಸಾಲೆ
೬೦. ಆಶಾ - ಆಸೆ
೬೧. ಯುಗ - ಜುಗ
೬೨. ಯವ್ವನ - ಜೌವ್ವನ
೬೩. ಶ್ರೀ - ಸಿರಿ

Friday, February 22, 2019

ನಾನಾರ್ಥಕಗಳು ೨೦೧೮-೧೯ qb ದ್ವಿತಿಯ ಪಿ.ಯು

೧. ಸೂಳ್ - ಸರದಿ, ಪ್ರದಕ್ಷಿಣೆ
೨. ಕರ - ಸುಂಕ, ಕೈ
೩. ರಾಗ - ಒಲುಮೆ, ಪ್ರೀತಿ, ಬಣ್ಣ, ಸ್ವರ ಮೇಳೈಕೆ
೪. ಕಳೆ - ಹುಲ್ಲು, ಪ್ರಕಾಶಿಸು
೫. ಬಗೆ - ವಿಧ, ಬಗೆಯುವುದು
೬. ದೊರೆ - ಸಿಗುವುದು, ರಾಜ
೭. ಗಂಡ - ಪತಿ, ಶೂರ
೮. ಹತ್ತಿ - ಅರಳೆ, ಹತ್ತುವುದು
೯. ಏರಿ - ಕೆರೆಯ ತಡೆಗೋಡೆ, ಏರುವುದು
೧೦. ಅರ್ಥ - ಹಣ, ಪದಗಳ ಅರ್ಥ
೧೧. ತೊರೆ - ಝರಿ, ಬಿಡುವುದು
೧೨. ನೆನೆ - ನೆನಪು, ಒದ್ದೆ
೧೩. ಲಘು - ಚಿಕ್ಕದು, ಮೌಲ್ಯರಹಿತ, ಛಂದೋಪ್ರಕಾರ
೧೪. ಗುರು - ದೊಡ್ಡದು, ಶಿಕ್ಷಕ, ಮೌಲ್ಯಯುತ,
                   ಛಂದೋಪ್ರಕಾರ
೧೫. ನರ - ಮನುಷ್ಯ, ನರಮಂಡಲ
೧೬. ಅರಿ - ಶತ್ರು, ತಿಳುವಳಿಕೆ
೧೭. ಮಡಿ - ಸಾವು, ಸ್ನಾನ
೧೮. ತೆರ - ವಿಧ, ಸುಂಕ
೧೯. ಸಾರು - ಉದಕ, ಪ್ರಚುರಪಡಿಸು,ಸಾರುವುದು
೨೦. ರಸ - ಆರು ರುಚಿ, ಒಂಭತ್ತು ರಸಗಳು, ಸಾರು
೨೧. ಪರಿ - ಪ್ರವಹಿಸು, ರೀತಿ(ವಿಧ),ಸ್ಥಿತಿ, ಪಾಡು
೨೨. ಕೊನೆ - ಅಂತ್ಯ, ಕುಡಿ(ಚಿಗುರು)
೨೩. ನೆರೆ - ಪ್ರವಾಹ, ಪಕ್ಕ, ವೃದ್ದಾಪ್ಯ
೨೪. ಹೊಳೆ - ತೊರೆ, ಪ್ರಕಾಶಿಸು(ಹೊಳೆಯುವುದು)
೨೫. ಎಡೆ - ಜಾಗ, ನೈವೇಧ್ಯ
೨೬. ಗುಡಿ - ದೇವಾಲಯ, ಬಾವುಟ(ಕೇತನ)
೨೭. ಕಲಿ - ಶೂರ, ಕಲಿಕೆ, ಯುಗದ ಹೆಸರು
೨೮. ಮರ್ಯಾದೆ - ಗೌರವ, ಕ್ರಮ, ದಡ
೨೯. ಹಿಂಡು - ಗುಂಪು, ಹಿಸುಕು
೩೦. ತಿಳಿ - ಶುದ್ಧವಾಗು(ಶುಭ್ರವಾಗು), ಗ್ರಹಿಸು
೩೧. ಬಟ್ಟೆ - ವಸ್ತ್ರ, ದಾರಿ
೩೨. ಉಸಿರು - ಶ್ವಾಸ, ಹೇಳು
೩೩. ಹಿಡಿ - ಮುಷ್ಟಿ, ಹಿಡಿದುಕೊಳ್ಳುವುದು
೩೪. ಹದ್ಧು - ಗರುಡ, ಎಲ್ಲೆ(ಮಿತಿ)
೩೫. ಅಡಿ - ಕೆಳಗೆ, ಪಾದ, ಅಳತೆಯ ಮಾಪನ
೩೬. ಕಂದ - ಮಗು (ಹಸುಳೆ), ಕಂದಪದ್ಯ
೩೭. ಮುನಿ - ಸನ್ಯಾಸಿ, ಕೋಪಗೊಳ್ಳು
೩೮. ಉತ್ತರ - ದಿಕ್ಕು, ಜವಾಬು, ಮುಂದಿನದು
೩೯. ಅರಸು - ರಾಜ, ಹುಡುಕು
೪೦. ನಡು - ಮಧ್ಯೆ, ಸೊಂಟ
೪೧. ಎಳೆ - ಆಕರ್ಶಿಸು, ನೂಲಿನೆಳೆ, ಎಳೆಯದು
೪೨. ಫಲ - ಹಣ್ಣು, ಪ್ರಯೋಜನ, ಲಾಭ
೪೩. ಕವಿ - ಆವರಿಸು, ಕಾವ್ಯರಚನೆಕಾರ
೪೪. ಬಂಟ - ಸೇವಕ, ಸೈನಿಕ, ವೀರ,ಶೂರ,ಸ್ತುತಿಪಾಠಕ
೪೫. ಮುಡಿ - ಕೂದಲು, ಮುಡಿದುಕೊಳ್ಳುವುದು


ಸಮಾನಾರ್ಥಕಗಳು..೨೦೧೮-೧೯ qb ದ್ವಿತಿಯ ಪಿ.ಯು

೧.ಚಂದ್ರ- ತಿಂಗಳ,ಸೋಮ
೨. ಕಾಂತಾರ - ಅರಣ್ಯ,ಅಡವಿ,ಕಾನನ,ವಿಪಿನ
೩. ಬಾನು - ಆಕಾಶ, ಆಗಸ
೪. ಕೂಳು - ಅನ್ನ, ಓಗರ
೫. ನಾರಿ - ಹೆಣ್ಣು, ಸ್ತ್ರೀ, ಅಂಗನೆ
೬. ಕಾಳ - ಕಪ್ಪು, ನೀಲ
೭. ಕಣ್ಣು - ನಯನ, ಅಕ್ಷಿ
೮. ಉರಗ - ಹಾವು, ಸರ್ಪ, ಅಹಿ
೯. ಮನೆ - ಗೃಹ, ಆಲಯ, ನಿಲಯ
೧೦. ಅನಲ - ಬೆಂಕಿ, ಅಗ್ನಿ
೧೧. ಅದುರು - ನಡುಗು,ಕಂಪಿಸು
೧೨. ಅಶ್ರು - ಕಣ್ಣೀರು,ಕಂಬನಿ
೧೩. ಇನ - ಸೂರ್ಯ,ರವಿ,ಆದಿತ್ಯ,ಭಾಸ್ಕರ,ಪ್ರಭಾಕರ
೧೪. ಉಂಬು - ತಿನ್ನು,ಸೇವಿಸು
೧೫. ಇಂಗು - ಬತ್ತು,ಒಣಗು
೧೬. ಒಡಲು - ಹೊಟ್ಟೆ, ಉದರ
೧೭. ಉಪಟಳ - ತೊಂದರೆ,ಹಿಂಸೆ
೧೮. ಕಂತೆ - ಹೊರೆ,ಕಟ್ಟು
೧೯. ಕವಲು - ಸೀಳು,ಟಿಸಿಲು
೨೦. ಕಡಲು - ಸಮುದ್ರ, ಸಾಗರ, ಅಬ್ದಿ
೨೧. ಕಲಹ - ಜಗಳ, ಕಾಳಗ,ಗಲಾಟೆ,ಯುದ್ಧ
೨೨. ಕೊರಗು - ಕಳವಳ, ಚಿಂತೆ
೨೩. ಚಿತ್ತ - ಮನಸ್ಸು, ಮನ
೨೪. ಛಾತಿ -ಧೈರ್ಯ, ಕೆಚ್ಚು
೨೫. ತೃಷೆ - ಬಾಯಾರಿಕೆ, ದಾಹ, ನೀರಡಿಕೆ
೨೬. ತಮ - ಕತ್ತಲು, ಅಂಧಕಾರ,ನಿಶೆ
೨೭. ದಿಗಿಲು - ಆತಂಕ, ಕಳಚಳ
೨೮. ದಿನ್ನೆ - ದಿಬ್ಬ, ದಿಣ್ಣೆ, ಎತ್ತರ ಪ್ರದೇಶ
೨೯. ಗುಡಿ - ದೇವಾಲಯ, ದೇಗುಲ
೩೦. ಧನ - ಹಣ,ಸಂಪತ್ತು
೩೧. ಧಣಿ - ಒಡೆಯ, ಯಜಮಾನ
೩೨. ಧನಿಕ - ಶ್ರೀಮಂತ, ಹಣವಂತ
೩೩. ತಾರೆ - ನಕ್ಷತ್ರ, ಚುಕ್ಕಿ, ನಿಹಾರಿಕೆ
೩೪. ನಿತ್ರಾಣ - ದುರ್ಬಲ, ಶಕ್ತಿಹೀನ
೩೫. ಪಥ - ದಾರಿ, ಮಾರ್ಗ
೩೬. ಪ್ರಮೋದ - ಸಂತೋಷ, ಉಲ್ಲಾಸ
೩೭. ಪರಿಮಳ - ಸುವಾಸನೆ, ಘಮ
೩೮. ಪುಷ್ಪ - ಹೂವು, ಕುಸುಮ, ಸುಮ
೩೯. ಬಂಗಾರ - ಚಿನ್ನ, ಕನಕ, ಸುವರ್ಣ
೪೦. ಬಾಲಕಿ - ಕುಮಾರಿ, ಹುಡುಗಿ
೪೧. ಮರ - ವೃಕ್ಷ, ತರು
೪೨. ಮಾಹೆ - ತಿಂಗಳು, ಮಾಸ
೪೩. ಮಾರ - ಮನ್ಮಥ, ಮದನ, ಅನಂಗ
೪೪. ಮರ್ಕಟ - ಮಂಗ, ಕೋತಿ,
೪೫. ರಮಣ - ಪತಿ, ಗಂಡ
೪೬. ವಲ್ಲಬೆ - ಹೆಂಡತಿ, ಪತ್ನಿ
೪೭. ವ್ಯಗ್ರ - ಕಳವಳ, ಉದ್ವೇಗ
೪೮. ಸಮರ - ಕಲಹ, ಜಗಳ, ಯುದ್ಧ, ದುರ
೪೯. ಸೊರಗು - ಬಾಡು, ಒಣಗು, ಮರುಗು
೫೦. ಸುತ - ಮಗ, ಕುಮಾರ, ಸುತ, ತನಯ
೫೧. ಕೇಡು - ಅಪಾಯ, ಕೆಡುಕು, ಆಪತ್ತು
೫೨. ಕರ್ಮ - ಕೆಲಸ, ಕಾರ್ಯ
೫೩. ಸಲಿಲ - ನೀರು, ಉದಕ
೫೪. ವಕ್ತ್ರ - ಮುಖ, ವದನ, ಮೊಗ
೫೫. ಪರಾಭವ - ಸೋಲು, ಅಪಜಯ
೫೬. ಕಡುಪು - ಪರಾಕ್ರಮ, ಶೌರ್ಯ
೫೭. ಡಂಬಕ - ಡಾಂಬಿಕ, ಆಶಾಡಭೂತಿ, ಭಕ್ತನಲ್ಲದವ
೫೮. ಹಂದೆ - ಹೇಡಿ, ಕೈಲಾಗದವ
೫೯. ನಂಜು - ವಿಷ, ಪಾಷಾಣ
೬೦. ದೀಪ - ಹಣತೆ, ದೀವಿಗೆ, ಪ್ರಣತಿ
೬೧. ಹರಿ - ವಿಷ್ಣು, ಕೇಶವ
೬೨. ಕುಂದು - ಕುಗ್ಗು, ಕ್ಷೀಣಿಸು
೬೩. ಮೊರೆ - ಅಹವಾಲು, ಗೋಳಾಟ, ಹುಯ್ಯಲು
೬೪. ಖತಿ - ರೇಗುವಿಕೆ, ಕೋಪ,
೬೫. ಧರೆ - ಭೂಮಿ, ವಸುಂಧರೆ, ಧರಿತ್ರಿ
೬೬. ಕುನ್ನಿ - ನಾಯಿ, ಶ್ವಾನ
೬೭. ಅಟ್ಟ - ಛಾವಣಿ, ಮಹಡಿ
೬೮. ಮಾಗು - ಪಕ್ವವಾಗು, ಕಳಿಯುವಿಕೆ
೬೯. ಸಂತೈಸು - ಸಮಾಧಾನಪಡಿಸು, ಸಾಂತ್ವನ ಹೇಳು
೭೦. ತಾಳ್ಮೆ - ಸಮಾಧಾನ, ಸಾವಧಾನ
೭೧. ಮೀಯು - ಸ್ನಾನಮಾಡು, ಮಡಿ
೭೨. ಸ್ಪುರಿಸು - ಮಿಂಚು, ಬುದ್ಧಿಗೆ ಗೋಚರಿಸು
೭೩. ಭಿನ್ನಾಣ - ಒನಪು, ವೈಯ್ಯಾರ, ಹಾಸ್ಯ, ಗೇಲಿ
೭೪. ಸಂಕುಲ - ಸಮೂಹ, ಗುಂಪು
೭೫. ಸ್ವಾದ - ರುಚಿ, ಸವಿ, ಸ್ವಾರಸ್ಯ
೭೬. ಪಂಕ - ಕೆಸರು, ರಾಡಿ
೭೭. ಉದಕ - ನೀರು, ಜಲ


Saturday, February 16, 2019

ದ್ವಿತೀಯ ಪಿ.ಯು.೨೦೧೯ question bank ಪದಗಳ ಅರ್ಥ.

೧. ಖೇಚರ - ಆಕಾಶದಲ್ಲಿ ಸಂಚರಿಸುವವರು,ವಿದ್ಯಾಧರರ,
                   ಗಂಧರ್ವರು, (ವಾನರರು)
೨. ಭೃಗ - ದುಂಬಿ
೩. ಭಂಗ - ಸೋಲು,ತೇಜೋಹಾನಿ,ಮುರಿಯುವಿಕೆ
೪. ಪ್ರಮೋದ - ಸಂತೋಷ, ಆನಂದ
೫. ಅರವಿಂದ - ತಾವರೆ, ಕಮಲ
೬. ಕಾಮ - ಮನ್ಮಥ, ಅನಂಗ
೭. ತೃಣ - ಹುಲ್ಲು, ನಿಕೃಷ್ಟ
೮. ತಲ್ಲಣ - ಅಂಜಿಕೆ, ಭಯ
೯. ಕಂಬನಿ - ಕಣ್ಣೀರು
೧೦. ಪುಳಕ- ರೋಮಾಂಚನ
೧೧. ಅಶ್ರುಜಲ - ಕಣ್ಣೀರು
೧೨. ಡಂಬಕ - ಮೋಸಗಾರ, ವಂಚಕ
೧೩. ಅಂಧಕ - ಕುರುಡ
೧೪. ಪಥ - ದಾರಿ, ಮಾರ್ಗ
೧೫. ಕುಬ್ಜ - ಕುಳ್ಳ, ಗಿಡ್ಡ
೧೬. ಶಿರ - ತಲೆ, ರುಂಡ
೧೭. ಅಂಗ - ದೇಹ, ಅವಯವ
೧೮. ಗೃಹ - ಮನೆ,ಬೀಡು, ಒಂದು ದೇಶ
೧೯. ಸಸೇಮಿರ - ಸ್ವಲ್ಪವೂ
೨೦. ಸೋಪಾನ - ಮೆಟ್ಟಿಲು, ಪಾವಟಿಗೆ
೨೧. ಅಹಿತ - ಶತ್ರು, ವಿರೋಧವಾದ
೨೨. ಕೇಡು - ಕೆಡುಕು, ಅಪಾಯ
೨೩. ಧರಿತ್ರಿ - ಭೂಮಿ, ಧರಣಿ
೨೪. ಸತಿ - ಹೆಂಡತಿ, ಮಡದಿ
೨೫. ಹೆದೆ - ಬಿಲ್ಲಿಗೆ ಹೂಡುವ ಬಾಣಕ್ಕೆ ಆಧಾರವಾದ ದಾರ
೨೬. ತಮ - ಕತ್ತಲೆ, ಅಂಧಕಾರ
೨೭. ಪೊಗರು - ಗರ್ವ, ಬಿಂಕ
೨೮. ಪುತ್ಥಳಿ - ಬೊಂಬೆ, ವಿಗ್ರಹ
೨೯. ಅಗ್ನಿ - ಬೆಂಕಿ, ಶಿಖಿ
೩೦. ಶಶಿ - ಚಂದ್ರ, ಸೋಮ
೩೧. ರಮಣ - ಪತಿ, ಗಂಡ
೩೨. ಕಲಿ - ಶೂರ, ವೀರ
೩೩. ಕಾಲರಾಯ - ಯಮ
೩೪. ನಂಜು - ವಿಷ, ಪಾಷಾಣ
೩೫. ಕುನ್ನಿ - ನಾಯಿಮರಿ
೩೬. ಸುತ - ಮಗ, ಕುಮಾರ
೩೭. ಖಗ - ಪಕ್ಷಿ
೩೮. ಸಲಿಲ - ನೀರು.