Sunday, February 24, 2019

   ಕವಿ-ಕಾವ್ಯಗಳಲ್ಲಿ ಸ್ವತಂತ್ರ ಮನೋಧರ್ಮ.

೧೩ನೇ ಶತಮಾನದ ಕಾಲಘಟ್ಟದಲ್ಲಿನ ಕಾವ್ಯಗಳಲ್ಲಿ ಮುಖ್ಯವಾಗಿ ಕವಿಗಳಲ್ಲಿ ಕಂಡುಬರುವ ಪ್ರವೃತ್ತಿಗಳಲ್ಲಿ ಸ್ವತಂತ್ರ ಮನೋಧರ್ಮವೂ ಒಂದು. ಈ ಕಾಲಘಟ್ಟದ ಬಹು ಮುಖ್ಯ ಕವಿಗಳಾದ ಜನ್ನ, ಹರಿಹರ, ರಾಘವಾಂಕರಲ್ಲಿ ಬಹು ಸ್ಷಷ್ಟವಾಗಿ ಸ್ವತಂತ್ರ ಮನೋಧರ್ಮ ಕಾವ್ಯ ಸನ್ನಿವೇಶಗಳಲ್ಲಿ ಕಾವ್ಯಧರ್ಮವನ್ನು ಅರಿತು ಬಳಕೆಯಾಗಿದೆ. ೧೩ನೇ ಶತಮಾನ ರಾಜಾಶ್ರಯದಿಂದ ದೈವಾಶ್ರಯಕ್ಕೆ ಹೊರಳಿದ ಕಾಲಘಟ್ಟ. ಇಲ್ಲಿ ಧರ್ಮಪ್ರಸಾರ ಮುಖ್ಯವಾದರೂ ಅದರೊಟ್ಟಿಗೆ ಕಾವ್ಯವಸ್ತುವೂ ಮುಖ್ಯಾಗಿದೆ.
      ಜನ್ನನ ಕಾಲಘಟ್ಟದ ಧರ್ಮಗಳೆರಡರ ತೀವ್ರ ಸಂಘರ್ಷದ ಹಿನ್ನೆಲೆಯಲ್ಲಿ ರಚಿತವಾಗಿರುವ 'ಯಶೋಧರ ಚರಿತೆ' ಮತ್ತು 'ಅನಂತನಾಥ ಪುರಾಣ' ಗಳು  ಸ್ವತಂತ್ರ ಮನೋಧರ್ಮದ ಪ್ರತೀಕವಾಗಿ ನಿಲ್ಲುತ್ತವೆ. ಸಂಸ್ಕೃತದ ವಾದಿರಾಜನ ಯಶೋಧರ ಚರಿತೆಯನ್ನೇ ಆಧರಿಸಿ ತನ್ನ ಯಶೋಧರ ಚರಿತೆಯನ್ನು ರಚಿಸಿದ್ದರೂ ಔಚಿತ್ಯಪೂರ್ಣವಾದ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಜನ್ನನು ಯಶೋಧರ ಚರಿತೆಯಲ್ಲಿ ವರ್ಣಿಸುವ ಚಂಡಮಾರಿ ಮತ್ತು ಅದರ ದೇವಾಲಯ ದ ಸುತ್ತಮುತ್ತಲ ಭೀಕರ ಸನ್ನಿವೇಶವು ವಾದಿರಾಜನಲ್ಲಿ ಜನ್ನನಷ್ಟು ರೌದ್ರ ಭೀಕರವಾಗಿ ವರ್ಣಿತವಾಗಿಲ್ಲ. ಅಲ್ಲಿ ಯತೋಚಿತವಾಗಿ ಬಂದಿರುವ ವರ್ಣನೆ ಜನ್ನನಲ್ಲಿ ನೈಜವಾಗಿ ಒಡಮೂಡಿದೆ. ಇದಕ್ಕೆ ಶೈವಮತೀಯರ ಹಿಂಸಾತ್ಮಕ ರೀತಿಯ ಮತಾಂತರದ ಅಂಶವು ಈ ಸನ್ನಿವೇಷದ ವರ್ಣನೆಗೆ ಜನ್ನನಿಗೆ ನೈಜ ಪ್ರೇರಣೆಯನ್ನೊದಗಿಸಿದೆ. ಸಂಸ್ಕೃತ ಮೂಲದ ಕಥೆಯೊಂದನ್ನ ಕನ್ನಡ ನಾಡಿನ ಮಣ್ಣಿನ ಸೊಗಡಿಗೂ, ತನ್ನ ಧರ್ಮದ ಆಶಯಕ್ಕೂ ಯಶಸ್ವಿಯಾಗಿ ಒಗ್ಗಿಸಿಕೊಳ್ಳುವಲ್ಲಿ ಆತನ ಸ್ವತಂತ್ರ ಮನೋಧರ್ಮ ವ್ಯಕ್ತವಾಗುತ್ತದೆ. ಯಶೋಧರ ಚರಿತೆಯಲ್ಲಿ  ಕೆಲವು ಉದಾಹರಣೆಗಳನ್ನು ಇದಕ್ಕೆ ಪೂರಕವಾಗಿ ನೋಡಬಹುದು.
    ತಾನೊಲಿದ ಮಾವುತನು ಅತ್ಯಂತ ಕುರೂಪಿಯೆಂದು ತಿಳಿದೂ ಅಮೃತಮತಿ "ಮರುಳೇ ಪೊಲ್ಲಮೆಯೆ ಲೇಸು ನಲ್ಲರಮೆಯ್ಯೊಳ್" ಎನ್ನುವ ಮಾತು ಮೂಲದಲ್ಲಿಲ್ಲ. ಈ ಮಾತಿನ ಮೂಲಕ ಜನ್ನ ಅಮೃತ ಮತಿಯ ಗಾಢ ಮೋಹವೆಷ್ಟಿತ್ತೆಂಬುದನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾನೆ. ಜನ್ನನ ಸ್ವತಂತ್ರ ಮನೋಧರ್ಮದ ಹಿನ್ನೆಲೆಯಲ್ಲಿ ಆತನ ಎರಡೂ ಕಾವ್ಯಗಳಲ್ಲಿ ಗಮನಿಸಬಹುದಾದ ಅಂಶವೆಂದರೆ ಆತ ಜೀವನದ ಎಲ್ಲ ದುರಂತತೆಗೂ ಅಥವಾ ಜೀವಿಯ ಅಸಹಜ, ಅಸಂಸ್ಕೃತ ನಡವಳಿಕೆಗಳಿಗೂ ವಿಧಿಯೇ ಕಾರಣ ಎನ್ನುತ್ತಾನೆ. ಉದಾಹರಣೆಗೆ "ಮನಸಿಜನ ಮಾಯೆ ವಿಧಿವಿಲಸನದ ನೆರಂಬಡೆಯೆ ಕೊಂದು ಕೂಗದೆ ನರರಂ", " ನಿಯತಿಯನಾರ್ ಮೀರಿದಪರ್", " ಬಿದಿಯೆಂಬ ಮದಗಜಂ ನೃಪಸದನಸರೋವರದೊಳೆರೆದು ಸೆಳೆ ತಂದುವನಾಂತದೊಳಿಕ್ಕಿದ ಬಾಳಮೃಣಾಳಿದವೊಳ್" ಎನ್ನುವ ಈ ಮಾತುಗಳು ಜನ್ನನ ಸ್ವತಂತ್ರ ಮನೋಧರ್ಮಕ್ಕಿಡಿದ ಕೈಗನ್ನಡಿಯಾಗಿವೆ.
    ಈ ಹಿನ್ನೆಲೆಯಲ್ಲಿ ಕೆ.ವಿ. ರಾಘವಾಚಾರ್ ರವರ " ಒಟ್ಟಿನಲ್ಲಿ ಜನ್ನನ ಕನ್ನಡ ಕೃತಿ ಸಂಸ್ಕೃತ ಕೃತಿಯ ಸರಳಾನುವಾದ ಎನ್ನಬಹುದು, ಜನ್ನನ ಕೃತಿ ವಾದಿರಾಜನ ಕೃತಿಯ ಅನುವಾದವೆಂದ ಮಾತ್ರಕ್ಕೆ ಕನ್ನಡದ್ದು ಸಂಸ್ಕೃತದ ಪಡಿಯಚ್ಚೆಂದಲ್ಲ, ಕನ್ನಡ ಕವಿಯ ಕೈವಾಡವಿಲ್ಲವೆಂದಲ್ಲ. ಜನ್ನಕವಿ ಎಡೆಯರಿತು ಕೆಲವನ್ನು ಹಿಗ್ಗಿಸಿದ್ದಾನೆ, ಕೆಲವನ್ನು ಅಡಕಿಸಿದ್ದಾನೆ. ಮೂಲದಲ್ಲಿ ಅನಗತ್ಯವೆಂದು ತೋರಿದ ಒಂದೆರಡು ಅಂಶಗಳನ್ನು ಬಿಟ್ಟಿದ್ದಾನೆ. ಭಾವ ಪುಷ್ಟಿಗಾಗಿಯೂ ಅರ್ಥಪ್ರಸಾದಕ್ಕಾಗಿಯೂ ಮೂಲದಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸಿದ್ದಾನೆ" ಎಂಬ ಮಾತು ಇದನ್ನು ಪುಷ್ಟೀಕರಿಸುತ್ತದೆ.
       ಮತ್ತೊಬ್ಬ ಕವಿ ರಾಘವಾಂಕನಲ್ಲಿ ಬಹುಮಟ್ಟಿಗೆ ಸ್ವತಂತ್ರ ಮನೋಧರ್ಮ ವ್ಯಕ್ತವಾಗಿರುವುದು ಅವನ ಮೊದಲ ಕೃತಿ ಹರಿಶ್ಚಂದ್ರಕಾವ್ಯದಲ್ಲಿ . ಹಾಗೆಂದು ಉಳಿದ ಕೃತಿಗಳಲ್ಲಿಲ್ಲವೆಂದಲ್ಲ. ಇದೆ ಆದರೆ ಅದರ ಪ್ರಮಾಣ ಕಡಿಮೆ. ಹರಿಶ್ಚಂದ್ರಕಾವ್ಯ ಹೊರತುಪಡಿಸಿ ಉಳಿದ ಕೃತಿಗಳಲ್ಲಿ ಆತ ಒಂದು ಚೌಕಟ್ಟಿನಲ್ಲಿ ಧಾರ್ಮಿಕ ಸೀಮಾರೇಖೆಯ ಒಳಗೆ ಕಾವ್ಯ ರಚಿಸಬೇಕಾದ ಅನಿವಾರ್ಯತೆ ಉಂಟಾಗಿ ಆತನ ಕಥೆ, ಶೈಲಿ, ಆಲೋಚನೆಗಳಿಗೆ ನಿಯಂತ್ರಣ ಹೇರಿವೆ. ಹಾಗಾಗಿಯೇ ಆತ ತನ್ನ ಕೃತಿಯಲ್ಲೊಂದು ಕಡೆಗೆ 'ದಡಿಗ ಜಿನನಂ' ಎಂದು ಪರದೈವ ಮತ್ತು ಪರಮತವನ್ನು ವಿಡಂಬಿಸುತ್ತಾನೆ. ಅದೇನೇ ಇದ್ದರೂ ಹರಿಹರನ ದಾಕ್ಷಾಯಿಣಿ ಶಿವನು ಬೇಡವೆಂದರೂ ತಂದೆಯ ಯಾಗಕ್ಕೆ ಹೋಗುತ್ತಾಳೆ. ಆದರೆ ರಾಘವಾಂಕನ ದಾಕ್ಷಾಯಿಣಿ ಶಿವನ ಒಪ್ಪಿಗೆ ಪಡೆದು ಧಕ್ಷನನ್ನು ಶಿಕ್ಷಿಸುವ ಆವೇಶದಿಂದ ಹೊರಡುತ್ತಾಳೆ. ಇಲ್ಲಿ ರಾಘವಾಂಕನ ಸ್ವತಂತ್ರ ಮನೋಧರ್ಮ ಬೆಳಗಿದೆ.
      ಇನ್ನು ಈತನ ಹರಿಶ್ಚಂದ್ರ ಕಾವ್ಯ ಇಂದ್ರ ಸಭೆಯಿಂದ ಆರಂಭವಾಗುತ್ತದೆ. ಉಳಿದವು ಕೈಲಾಸದಿಂದ ಆರಂಭವಾಗುತ್ತವೆ. ಋಷಿಗಳೀರ್ವರ ಪ್ರತಿಷ್ಟೆ, ಕಲಹಗಳು ರಾಜನಾದ ಹರಿಶ್ಚಂದ್ರನ ಸಂಕಟಕ್ಕೆ ಕಾರಣವಾಗುತ್ತವೆ. ಕಾವ್ಯದ ಶೈಲಿ, ಕತೆ, ಪ್ರಕಾರ, ಹರಿವು-ಹೊಳವು ಎಲ್ಲದರಲ್ಲಿಯೂ ಸ್ವಂತಿಕೆಯಿದೆ. "ಬಾ ರಥವನೇರಿಕೊಳ್, ಆನೊಲ್ಲೆ, ಏಕೊಲ್ಲೆ, ಪರರೊಡವೆ ನನಗಾಗದು, ಆನೀವೆನ್, ಇತ್ತುದನೇನ್ ಈವುದು" ಎನ್ನುವಲ್ಲಿ ಕವಿಯ ನಾಟಕೀಯತೆ ತಿಳಿಯುತ್ತದೆ. ಷಟ್ಪದಿ ಪ್ರಕಾರ ಇಡೀ ಕಾವ್ಯಕ್ಕೆ ಈತನಿಂದಲೇ ಮೊದಲಾದರೂ ಅದನ್ನು ಸಮರ್ಥವಾಗಿ ವಾಗ್ಜರಿಯಾಗಿಸಿದ್ದಾನೆ. ಉದ್ದಂಡ ಷಟ್ಪದಿಯಂತ ಒಂದು ಹೊಸ ಷಟ್ಪದಿ ಪ್ರಕಾರದ ಸೈಷ್ಠಿಕರ್ತನೀತ. ಹೀಗೆ ಅನೇಕ ಆಯಾಮಗಳಲ್ಲಿ ಕವಿಯ ಸ್ವತಂತ್ರ ಮನೋಧರ್ಮ ಪ್ರಜ್ವಲಿಸಿದೆ . 

    ಹರಿಹರ ಮತ್ತೊಬ್ಬ ಪ್ರಮುಖ  ಮತ್ತು ಅಪರೂಪದ ಕವಿ. ಆತನ ಕಥಾವಸ್ತುಗಳಲ್ಲೇ ಸ್ವತಂತ್ರತೆಯಿದೆ. ಆ ಯುಗಧರ್ಮದಲ್ಲಿ ಪ್ರಸಿದ್ದವಾಗಿದ್ದ ಪುರಾಣ ಕಥಾವಸ್ತುಗಳು ಮತ್ತು ಉಪಾಖ್ಯಾನಗಳ ಕಥಾವಸ್ತುವನ್ನು ಕಾವ್ಯಕ್ಕೆ ವಸ್ತುವಾಗಿಸಿದ. ಅಲ್ಲದೆ 'ರಗಳೆ' ಎಂಬ ಹೊಸ ಪ್ರಕಾರದಲ್ಲಿ ಕಾವ್ಯರಚಿಸಿ ಭಾವ, ಭಕ್ತಿಯ ನಿರರ್ಗಳತೆಯನ್ನು ಉಳಿಸಿಕೊಂಡನಲ್ಲದೆ " ಈಶ್ವರಂಗೆಯ್ದೆ ನಾಲಗೆಯಂ ಮಾರಿದೆಂ". "...ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆ.....ಅನವರತಂ ಪೊಗಳ್ದು ಕಡಬೇಡಲೆ ಮಾನವ ನೀನಹರ್ನಿಶಂ ನೆನೆ ಪೊಗಳರ್ಚಿಸೆಮ್ಮ ಕಡು ಸೊಂಪಿನ ಪೆಂಪಿನ ಹಂಪೆಯಾಳ್ದನಂ". ಎನ್ನುವಲ್ಲಿ ಆತನ ಮನೋಧರ್ಮ ಅಭಿವ್ಯಕ್ತಗೊಂಡಿದೆ. ಶರಣರ ಜೀವನವೂ ಕಾವ್ಯವೊಂದರ ವಸ್ತುವಾಗುತ್ತದೆಂಬುದನ್ನು ಮೊದಲಿಗೆ ಯಶಸ್ವಿಯಾಗಿ ಸಹೃದಯರಿಗೆ ಮುಟ್ಟಿಸಿದವನು ಹರಿಹರ. ಅಂದರೆ ಎಲ್ಲಿಯೋ, ಯಾವಾಗಲೋ, ಯಾರೋಹೇಳಿದ ಕಾಲ್ಪನಿಕವೆನ್ನಲು ಸಾಧ್ಯವಿರುವ, ಹೇಳಿದ್ದಷ್ಟೂ ಸತ್ಯವಲ್ಲದ ಪುರಾಣದ ಕಥೆಗಳಿಗಿಂತ ತಾನು ಕಂಡರಿತ ಅಥವಾ ತನಗಿಂತ ಕೆಲ ವರ್ಷಗಳ ಹಿಂದೆ ಬಾಳಿ ಬದುಕಿದ ಕೆಲ ಸಮಕಾಲೀನ ಶಿವಶರಣರು ಅಂದರೆ ೬೩ ಪುರಾತನರು ಹಾಗೂ ೬೩ ನೂತನರ ಜೀವನವನ್ನೇ ರಗಳೆಯ ವಸ್ತುವನ್ನಾಗಿಸಿದ್ದನ್ನು ಕಂಡರೆ ಅವನ ಸ್ವತಂತ್ರ ಮನೋಧರ್ಮ ತಿಳಿದುಬರುತ್ತದೆ.
      ಇನ್ನು ಗಿರಿಜಾ ಕಲ್ಯಾಣದಲ್ಲಿ ಕವಿಯ ಸ್ವಂತಿಕೆ ಗುರ್ತಿಸಲು ಸಾಧ್ಯವಿದೆ. ಇದಕ್ಕೆ ವಸ್ತುವನ್ನು ಪುರಾಣ ಮತ್ತು ಕಾಳಿದಾಸನ ಕುಮಾರ ಸಂಭವದಿಂದ ಕೆಲ ಮಟ್ಟಿಗೆ ಪಡೆದಿದ್ದು ಇಡೀ ಕಥೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಇಲ್ಲಿನ ಕಥಾರಂಭದ ಶೈಲಿಯೇ ಬೇರೆ. ಅದುವರೆಗೂ ಯಾವ ಕಾವ್ಯದಲ್ಲೂ ಕಾಣದ ಸ್ತ್ರೀ ಪ್ರಧಾನ ಮತ್ತು ಸ್ತ್ರೀ ಪರ ದೃಷ್ಠಿಕೋನ, ಸ್ತ್ರೀ ಛಲದ ಮೂಲಕ ದೈವೀಪುರುಷನನ್ನು ಒಲೊಸಿಕೊಂಡ ಬಗೆ ಹೊಸರೀತಿಯ ಆಲೋಚನೆಯೇ ಆಗಿದೆ. ಇಲ್ಲಿನ ಕಥಾ ನಾಯಕಿ ಗಿರಿಜೆ, ಅವಳಿಂದಲೇ ಕಥೆಯ ಆರಂಭ. ಇದು ಹೊಸ ಪ್ರಯೋಗ. ಮೂಲ ಕಾವ್ಯಕ್ಕೂ ಹರಿಹರನ ಕಾವ್ಯಕ್ಕೂ ಅನೇಕ ಹೊಸತನವಿದೆ. ಬೃಹಸ್ಪತಿಯ ದೌತ್ಯ, ವಿಷ್ಣುವಿನಿಂದ ಕಾಮನ ಮನವೊಲಿಸುವಿಕೆ ಇವು ಅದಕ್ಕೆ ಉದಾಹರಣೆಗಳು.
    ಇವಲ್ಲದೆ ವಟುವೇಷದ ಶಿವನನ್ನು ಗಿರಿಜೆ ವಿಭೂತಿಯಿಂದ ಹೊಡೆಯುವುದು ಹರಿಹರನಿಂದ ಸ್ವಯಂ ಕಲ್ಪಿತವಾದ ಸನ್ನಿವೇಷವಾಗಿದೆ. ಅಲ್ಲದೆ ಧರ್ಮ ಮತ್ತು ಕಾವ್ಯಧರ್ಮ,  ಅದರೊಟ್ಟಿಗೆ ಸ್ವತಂತ್ರ ಮನೋಧರ್ಮವು ಬೆರೆತಿರುವುದಕ್ಕೆ ಒಳ್ಳೆಯ ದೃಷ್ಟಾಂತವೆಂದರೆ ಶಿವ- ಪಾರ್ವತಿಯರ ವಿವಾಹ. ಇಲ್ಲಿ ವರ್ಣಿಸುವ ವಿವಾಹ ಸಮಾರಂಭ ಶೈವ ಸಂಪ್ರದಾಯದ ಮದುವೆಯ ವರ್ಣನಯೇ ಆಗಿದೆ. ಹಾಗಯೇ ರಗಳೆಯ ಪ್ರಕಾರವನ್ನು ಬಳಸಿ ಹರಿಹರ ಮಾರ್ಗವನ್ನೇ ನಿರ್ಮಿಸಿದನು.
       ಒಟ್ಟಾರೆ ಇವರಷ್ಟೇ ಅಲ್ಲದೆ ಈ ಕಾಲಘಟ್ಟದ ಬೇರೆ ಕವಿಗಳಾದ ಆಂಡಯ್ಯ, ದೇವಕವಿ, ರುದ್ರಭಟ್ಟ, ಕವಿಕಾಮ, ಚೌಂಡರಸ ಮುಂತಾದವರ ಕಾವ್ಯಗಳಲ್ಲೂ ಸ್ವತಂತ್ರ ಮನೋಧರ್ಮ ವ್ಯಕ್ತಗೊಂಡಿದೆ. ಕನ್ನಡದ ಈ ಕಾಲಘಟ್ಟದ ಕೃತಿಗಳು ಯಾವುದೇ ಕಾವ್ಯಕೃತಿಗಳ ಯಥಾರ್ಥ ಅನುವಾದವಲ್ಲ. ಅವುಗಳು ಕವಿ ಪ್ರತಿಭೆಯ ಸ್ವಂತಿಕೆ ಮತ್ತು ಸ್ವಯಂ ಅನುಭವದಲ್ಲಿ ಅರಳಿದ ಕಾವ್ಯಕಮಲಗಳೆಂದರೆ ಅತಿಶಯೋಕ್ತಿಯಲ್ಲ. ಇಂತಹ ಹಲವು ನಿದರ್ಶನಗಳು ಕನ್ನಡ ಸಾಹಿತ್ಯದಲ್ಲಿದ್ದು ಕವಿಗಳ ಸ್ವತಂತ್ರ ಮನೋಧರ್ಮಕ್ಕಿಡಿದ ನಿದರ್ಶನಗಳಾಗಿವೆ.

No comments:

Post a Comment